ಸಿ. ಎನ್. ಮುಕ್ತಾ (ಏಪ್ರಿಲ್ ೩೦, ೧೯೫೧) ಕನ್ನಡದ ಜನಪ್ರಿಯ ಕಥೆಗಾರ್ತಿಯರಲ್ಲಿ ಒಬ್ಬರೆನಿಸಿದ್ದಾರೆ. == ಜೀವನ == ಸಾಹಿತ್ಯದ ಪರಿಸರ, ಸಾಹಿತಿಗಳ ವಂಶಕ್ಕೆ ಸೇರಿದ ಸಿ.ಎನ್‌. ಮುಕ್ತಾ ಚಿತ್ರದುರ್ಗದಲ್ಲಿ 1951ರ ಏಪ್ರಿಲ್‌ 30ರಂದು ಜನಿಸಿದರು. ತಂದೆ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಸಿ.ಬಿ. ನರಸಿಂಹಮೂರ್ತಿ. ಇವರ ಅಣ್ಣ ರಂಗಭೂಮಿ, ಆಕಾಶವಾಣಿ ನಟರಾಗಿದ್ದ ಸಿ.ಬಿ. ಜಯರಾವ್. ಇವರ ಸೋದರಮಾವ, ‘ಕೆಲವು ನೆನಪುಗಳು’ ಕರ್ತೃ ನವರತ್ನ ರಾಮರಾವ್. ಮುಕ್ತಾ ಅವರ ತಾಯಿ ಕಮಲಮ್ಮ. ಪ್ರಾರಂಭಿಕ ಶಿಕ್ಷಣವನ್ನು ಹೆಗ್ಗಡದೇವನ ಕೋಟೆ ತಾಲ್ಲೂಕಿನ ಸಂತೆ ಸರಗೂರು ಹಾಗೂ ಕೆ.ಆರ್. ನಗರಗಳಲ್ಲಿ ಪಡೆದ ಮುಕ್ತಾರವರು ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಿ.ಎ. ಪದವಿ ಮತ್ತು ಸರಕಾರಿ ಕಾಲೇಜಿನಿಂದ ಬಿ.ಎಡ್‌. ಪದವಿಗಳನ್ನು ಪಡೆದು, ಪ್ರೌಢಶಾಲಾ ಉಪಾಧ್ಯಾಯಿನಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. == ಕಥಾಸಕ್ತಿಯ ಚಿಗುರು == ಪ್ರೈಮರಿ ಶಾಲೆಯಲ್ಲಿದ್ದಾಗಲೇ ನೀತಿ ಪಾಠದ ತರಗತಿಯಲ್ಲಿ ಚನ್ನಬಸವಯ್ಯ ಎಂಬ ಮಾಸ್ತರರು ಕಾದಂಬರಿಗಳನ್ನು ತಂದು, ಕಣ್ಣಿಗೆ ಕಟ್ಟುವಂತೆ ರಸವತ್ತಾಗಿ ಮಾಡುತ್ತಿದ್ದ ವರ್ಣನೆಗಳಿಂದ ಪ್ರಭಾವಿತರಾದ ಮುಕ್ತಾ ಅವರಿಗೆ ಸಾಹಿತ್ಯದ ಕಡೆ ಒಲವು ಚಿಗುರ ತೊಡಗಿತು. ಮಾಸ್ತರರಿಂದ ಪಡೆದು ಮೊದಲು ಓದಿದ ಕಾದಂಬರಿ ತ.ರಾ.ಸು. ಅವರ ಚಂದವಳ್ಳಿಯ ತೋಟ. ಹೈಸ್ಕೂಲಿಗೆ ಬಂದಾಗ ಪ್ರೋತ್ಸಾಹ ನೀಡಿದವರು ಕನ್ನಡ ಪಂಡಿತೆ ನಾಗಲಕ್ಷ್ಮಮ್ಮನವರು. ಮುಂದೆ ರವೀಂದ್ರನಾಥ ಠಾಕೂರ್, ಶರಶ್ಚಂದ್ರರ ಕಾದಂಬರಿಗಳ ಅನುವಾದಗಳನ್ನೆಲ್ಲಾ ಓದಿದರು. ಕಾಲೇಜಿನಲ್ಲಿ ಅಧ್ಯಾಪಕಿ ಯಾಗಿದ್ದ ಬಿ.ಎಸ್‌. ರುಕ್ಕಮ್ಮನವರಿಂದ ಪ್ರೇರಿತರಾಗಿ ಚಿತ್ರದುರ್ಗದ ಇತಿಹಾಸದ ಕಾದಂಬರಿಗಳನ್ನು ಓದಿದರು. ಚಿಕ್ಕ ಹುಡುಗಿಯಾಗಿದ್ದಾಗಲೇ ನವರತ್ನ ರಾಮರಾಯರು ‘ಕೆಲವು ನೆನಪುಗಳು’ ಪುಸ್ತಕ ಕೊಟ್ಟು ಇವರಲ್ಲಿ ಸಾಹಿತ್ಯಾಭಿಲಾಷೆ ಚಿಗುರುವಂತೆ ಮಾಡಿದ್ದರು. == ಕಾದಂಬರಿಗಾರ್ತಿಯಾಗಿ == ಹೀಗೆ ಓದುತ್ತಾ ಹೋದಂತೆಲ್ಲಾ ಬರೆಯಬೇಕೆಂಬ ತುಡಿತ ಪ್ರಾರಂಭವಾಗುತ್ತಿದ್ದ ದಿನಗಳಲ್ಲಿ, ಅಕ್ಕ ಪದ್ಮಜಾ ಸುಂದರೇಶ್‌ ಅವರ ‘ಅನಿರೀಕ್ಷಿತ’ ಕಾದಂಬರಿಯು ಪ್ರಜಾಮತದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಾಗ, ಇವರಿಗೂ ಕಾದಂಬರಿ, ಕಥೆಗಳನ್ನು ಏಕೆ ಬರೆಯಬಾರದೆನ್ನಿಸಿ ಬರೆದ ಮೊದಲ ಕಾದಂಬರಿ ‘ಆಶ್ರಯ’. ಇದನ್ನು ‘ಪ್ರಜಾಮತ’ ಪತ್ರಿಕೆಗೆ ಕಳುಹಿಸಿದಾಗ, ಸಂಪಾದಕರಾಗಿದ್ದ ಮ.ನ. ಮೂರ್ತಿಯವರು ಓದಿ, ಪ್ರಶಂಸಿಸಿ ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ಬರೆದ ಹಲವಾರು ಕಥೆಗಳು ಮಲ್ಲಿಗೆ, ಸುಧಾ ಮುಂತಾದ ವಾರಪತ್ರಿಕೆಗಳಲ್ಲೂ ಪ್ರಕಟವಾಗ ತೊಡಗಿತು. === ಪ್ರಕಟಿತ ಕಾದಂಬರಿಗಳು === ಅನಾವರಣ, ಅಪರಿಚಿತರು, ಅಸ್ವೀಕೃತರು, ಅನುರಾಗ ತಂದ ಅನುಬಂಧ, ಗೆಲುವಿನ ಹೆಜ್ಜೆ, ಕ್ಷಮಯಾಧರಿತ್ರಿ, ಸುಖದ ಸೋಪಾನಗಳು, ದಡ ಸೇರಿದ ನೌಕೆ, ಜೀವನ ಚಕ್ರ, ಅಮೃತಮಯಿ, ಕುಸುಮ ಕಸ್ತೂರಿ, ದುಂಬಿ ಕೊರೆದ ಹೂವು, ಪ್ರೇಮಾಂಜಲಿ, ವಿಮುಕ್ತಿ, ಪರಿಭ್ರಮಣ ಮುಂತಾದ 75 ಕ್ಕೂ ಹೆಚ್ಚು ಕಾದಂಬರಿಗಳು, ಹತ್ತಾರು ಕಿರುಕಾದಂಬರಿಗಳು ಪ್ರಕಟಗೊಂಡಿದ್ದು ಇವುಗಳಲ್ಲಿ ಹಲವಾರು ಕಾದಂಬರಿಗಳು ಸುಧಾ, ಗೆಳತಿ, ಮಲ್ಲಿಗೆ, ಸಂಯುಕ್ತ ಕರ್ನಾಟಕ, ಮಂಜುವಾಣಿ, ವನಿತಾ, ಮಂಗಳ, ಕರ್ಮವೀರ ಮುಂತಾದ ನಿಯತಕಾಲಿಕಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ. === ಸಣ್ಣ ಕತೆ ಮತ್ತು ಇತರ ಬರಹಗಳು === ಮುಕ್ತಾ ಅವರ ಸಣ್ಣ ಕಥೆಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲೆಲ್ಲಾ ಪ್ರಕಟಗೊಂಡಿದ್ದು, ವರ್ತುಲ, ಆವರಣ, ಸುಳಿ, ವೃತ್ತಗಳು, ಆವರ್ತನ, ನಮ್ಮನಮ್ಮೊಳಗೆ, ಮೂರು ಮುಷ್ಠಿಯ ಬದುಕು ಮುಂತಾದ ಕಥಾಸಂಕಲನಗಳಲ್ಲಿ ಸೇರಿವೆ. ಒಂದು ಪ್ರಬಂಧ ಸಾಹಿತ್ಯವಲ್ಲದೆ ಮಕ್ಕಳಿಗಾಗಿ ಮೂರು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇದಲ್ಲದೆ ಹಲವಾರು ಶೈಕ್ಷಣಿಕ ಲೇಖನಗಳನ್ನು ಬರೆದಿದ್ದಾರೆ. ಲೇಖಕಿಯರ ಕಥಾ ಸಂಚಯವನ್ನು ಸಂಪಾದಿಸಿದ್ದಾರೆ. ಸಾಹಿತ್ಯದ ಇತರ ಪ್ರಕಾರಗಳಲ್ಲೂ ಅವರ ಸೇವೆ ಸಂದಿದೆ. === ಸಿನಿಮಾ, ದೂರದರ್ಶನಗಳಲ್ಲಿ === ಸುಖದಸೋಪಾನ, ಕ್ಷಮಯಾಧರಿತ್ರಿ, ದಡ ಸೇರಿದ ನೌಕೆ, ಜೀವನಚಕ್ರ, ಗೆಲುವಿನ ಹೆಜ್ಜೆ, ಅಮೃತಮಯಿ, ಮೌನರಾಗ, ಮುಂತಾದ ಕಾದಂಬರಿಗಳು ದೂರದರ್ಶನದಲ್ಲಿ ಧಾರಾವಾಹಿಗಳಾಗಿ ಪ್ರಸಾರವಾಗಿದ್ದರೆ' ಕಿರುಚಿತ್ರಗಳಾಗಿ ಸೆಳೆತ, ಪಾಲು, ಮುಖವಾಡ, ತಾಯಿಕರುಳು ಕಾದಂಬರಿಗಳು ಪ್ರಸಿದ್ಧಿ ಪಡೆದಿವೆ. ವಿಮುಕ್ತೆ ಮತ್ತು ಮೇಘಮಂದಾರ ಕಾದಂಬರಿಗಳು ‘ದೋಣಿಸಾಗಲಿ’ (ನಿರ್ದೇಶನ-ರಾಜೇಂದ್ರಸಿಂಗ್‌ ಬಾಬು) ಮತ್ತು ‘ಮಿಸ್‌ ಕ್ಯಾಲಿಫೋರ್ನಿಯ’ (ನಿರ್ದೇಶನ-ಕೋಡ್ಲು ರಾಮಕೃಷ್ಣ) ಎಂಬ ಹೆಸರಿನಿಂದ ಚಲನಚಿತ್ರಗಳಾಗಿವೆ. == ಪ್ರಶಸ್ತಿ ಗೌರವಗಳು == ಸಾಹಿತ್ಯದ ಎಲ್ಲ ಪ್ರಕಾರಗಳ ಬರವಣಿಗೆಯಲ್ಲಿಯೂ ತೊಡಗಿಸಿ ಕೊಂಡಿದ್ದು ನೂರಾರು ಕೃತಿ ರಚಿಸಿರುವ ಸಿ.ಎನ್‌. ಮುಕ್ತಾರವರಿಗೆ- ಆರ್ಯಭಟ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ತ್ರಿವೇಣಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. == ಮಾಹಿತಿ ಆಧಾರ == ಕಣಜ ಮತ್ತು ಇತರ ಅಂತರಜಾಲ ತಾಣಗಳು